ಆಟ್ವೆ, ಥಾಮಸ್
ಇಂಗ್ಲಿಷ್ ನಾಟಕಕಾರ. ಹದಿನೇಳನೆಯ ಶತಮಾನದ ದ್ವಿತೀಯಾರ್ಧ ಕಲ್ಪನಾಪ್ರಧಾನವಾದ ರೊಮ್ಯಾಂಟಿಕ್ ಪಂಥದ ದುರಂತನಾಟಕ ಅವನತಿಹೊಂದಿ ಸಂಭಾಷಣಾಚಾತುರ್ಯ, ಆಡುಮಾತಿನ ಗದ್ಯ ಪ್ರಯೋಗ, ಅನೀತಿಜೀವನವನ್ನು ಚಿತ್ರಿಸುವ ಕಥಾವಸ್ತು-ಮೊದಲಾದುವುಗಳಿಂದ ಕೂಡಿದ ಸಾಮಾಜಿಕ ಹಾಸ್ಯ ನಾಟಕ ಜನಪ್ರಿಯವಾಗಿದ್ದ ಕಾಲ. ಆಗ ಹಿಂದಿನ ರೊಮ್ಯಾಂಟಿಕ್ ನಾಟಕದ ಪ್ರತಿನಿಧಿಯಾಗಿ ಕಾಣಿಸಿಕೊಂಡವನು ಆಟ್ವೆ. ಅವನ ಮುಖ್ಯ ನಾಟಕಗಳು 'ದಿ ಆರ್ಫನ್ (1680) ಮತ್ತು 'ವೆನಿಸ್ ಪ್ರಿಸರ್ವಡ್ (1682). ಷೇಕ್‍ಪಿಯರನ ನಾಟಕಗಳ ಮಟ್ಟಕ್ಕೆ ಏರದಿದ್ದರೂ ಇವುಗಳಲ್ಲಿ ಭಾವತೀವ್ರತೆ, ಕಲ್ಪನಾವೈಶಿಷ್ಟ್ಯ ಮತ್ತು ಇತರ ಕಾವ್ಯಗುಣಗಳು ಬೇಕಾದಷ್ಟಿವೆ. ಇಬ್ಬರು ಸಹೋದರರನ್ನು ಆಕರ್ಷಿಸಿದ ಕನ್ಯೆಯೊಬ್ಬಳ ದಾರುಣ ಕಥೆಯಾದ 'ದಿ ಆರ್ಫನ್‍ನಲ್ಲಿ ಔಚಿತ್ಯದ ಎಲ್ಲೆಯನ್ನು ಮೀರುವಂತೆ ತೋರಿದರೂ ಸನ್ನಿವೇಶದ ಕಟಕಿ ಪರಿಣಾಮಕಾರಿಯಾಗಿದೆ. 'ವೆನಿಸ್ ಪ್ರಿಸರ್ವಡ್ ಆ ಕಾಲದ ಅತ್ಯುತ್ತಮ ದುರಂತನಾಟಕವೆಂದು ಪರಿಗಣಿತವಾಗಿದೆ. ಪತ್ನಿಯಲ್ಲಿನ ಪ್ರೇಮ ಮತ್ತು ತನ್ನ ಗುಂಪಿನ ನಿಯತ್ತು ಇವುಗಳ ಘರ್ಷಣೆಗೆ ಸಿಕ್ಕಿತೊಳಲುವ ಇಲ್ಲಿನ ಮುಖ್ಯ ಪಾತ್ರ ಹೃದಯಸ್ಪರ್ಶಿಯಾಗಿದೆ. ಆಟ್ವೆಯಲ್ಲಿ ಭಾವತೀವ್ರತೆ ಹೆಚ್ಚು, ಸನ್ನಿವೇಶದಿಂದ ಬರಬಹುದಾದ ಕರುಣೆಯನ್ನು ಹಿಂಡಿ ಹಿಂಡಿ ಪ್ರೇಕ್ಷಕನ ಅನುಭವಕ್ಕೆ ನಾಟುವಂತೆ ಮಾಡುವುದೇ ನಾಟಕಕಾರನ ಉದ್ದೇಶ. ಈ ಯುಗದ ನಾಟಕಗಳಲ್ಲಿ ಕಾಣಸಿಗುವ ಕೃತಕತೆ ಇಲ್ಲಿಲ್ಲ. ಪದಗಳ ಆಯ್ಕೆ ಮತ್ತು ಬಳಕೆಯಲ್ಲಿ ಸಹಜತೆಯುಂಟು. ಇವನ ನಾಟಕಗಳು 'ಹಿರಾಯಿಕ್ ಟ್ರ್ಯಾಜೆಡಿ' ಯಿಂದ 'ಸೆಂಟಿಮೆಂಟಲ್ ಟ್ರ್ಯಾಜೆಡಿ' ಯತ್ತ ಹೆಜ್ಜೆ ಇಟ್ಟವು. ಇವನ ಕೃತಿಗಳು ಗಂಭೀರನಾಟಕ ಪರಿಣಾಮವನ್ನುಂಟುಮಾಡುವುದಕ್ಕಿಂತ ಕರುಣಾಜನಕವಾಗಿವೆ. ಆಟ್ವೆ ತನ್ನ ಕಾಲಕ್ಕೆ ಡ್ರೈಡನ್‍ನಿಗೆ ಎರಡನೆಯವನೆನಿಸಿದ ನಾಟಕಕಾರ.

(ಎಲ್.ಎಸ್.ಎಸ್.; ಎಂ.ಆರ್.)
(ಪರಿಷ್ಕರಣೆ: ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ